ಚಂದ್ರ 2

ದೆಹಲಿಯ ಸಮೀಪದಲ್ಲಿ, ಈಗ ರಾಜಧಾನಿಯ ಒಂದು ಉಪನಗರವಾಗಿರುವ ಮೆಹರೌಲಿ ಎಂಬ ಗ್ರಾಮದಲ್ಲಿ ನಿಲ್ಲಿಸಿದ ಕಬ್ಬಿಣದ ಕಂಬದ ಮೇಲೆ ಕೊರೆಯಲಾದ, ಕ್ರಿ.ಶ. 5ನೆಯ ಶತಮಾನಕ್ಕೆ ಸೇರಿದ, ಸಂಸ್ಕøತ ಭಾಷೆಯ, ಆರು ಸಾಲುಗಳುಳ್ಳ, ಶಾಸನದಲ್ಲಿ ಉಲ್ಲೇಖಿತನಾದ ಒಬ್ಬ ದೊರೆ. ಅದರಲ್ಲಿ ಈತನ ಪ್ರಶಸ್ತಿ ಇದೆ. ಈತ ಕುರುಕ್ಷೇತ್ರ ಮತ್ತು ಬಿಯಾಸ್ ನದಿಯ ಸಮೀಪದ ವಿಷ್ಣುಪದವೆಂಬ ಗಿರಿಯಲ್ಲಿ ವಿಷ್ಣುಧ್ವಜವನ್ನು ಸ್ಥಾಪಿಸಿದನೆಂದು ಶಾಸನ ಹೇಳುತ್ತದೆ. ಈ ಚಂದ್ರ ಸ್ವಸಾಮಥ್ರ್ಯದಿಂದ ಪೂರ್ವದಲ್ಲಿ ವಂಗ, ಪಶ್ಚಿಮದಲ್ಲಿ ಸಿಂಧೂಮುಖ, ದಕ್ಷಿಣದಲ್ಲಿ ಜಲನಿಧಿ ಮತ್ತು ಉತ್ತರದಲ್ಲಿ ವಹ್ಲಿಕದವರೆಗಿನ ಪ್ರದೇಶವನ್ನು ದಿಗ್ವಜಯದಿಂದ ಸಾಧಿಸಿದನೆಂದಿದೆ. ಇದು ಉತ್ಪ್ರೇಕ್ಷೆಯಾಗಿದ್ದಿರಬಹುದು. ಈ ಚಂದ್ರ ಯಾರು ಎಂಬ ವಿಷಯದಲ್ಲಿ ವಿವಾದಗಳೆದ್ದಿದ್ದುವು. ಈತ ಮೌರ್ಯ ಚಂದ್ರಗುಪ್ತನೆಂದು ಮೊದಲು ಮಾಡಿದ ಊಹೆಯನ್ನು ಅಲ್ಲಗಳೆಯಲಾಗಿದೆ. ಸುಸುನಿಯ ಶಾಸನದ ಚಂದ್ರವರ್ಮ, ನಾಗವಂಶದ ಚಂದ್ರಾಂಶು, ಗುಪ್ತರ ಒಂದನೆಯ ಚಂದ್ರಗುಪ್ತ ಇವರುಗಳಲ್ಲಿ ಒಬ್ಬನಾಗಿರಬಹುದೆಂದು ಬೇರೆಬೇರೆ ಪಂಡಿತರು ಸೂಚಿಸಿದ್ದಾರೆ. ಆದರೂ ಶಾಸನದ ಕಾಲ, ಈತ ದಿಗ್ವಿಜಯಕ್ಕೆ ಹೊರಟನೆಂಬ ವಿಷಯ, ವಿಷ್ಣುಧ್ವಜವನ್ನು ಸ್ಥಾಪಿಸಿದ ಉಲ್ಲೇಖ, ದೆಹಲಿ ಹಾಗೂ ಸುತ್ತಲಿನ ಪ್ರದೇಶಗಳು ಅವನ ಅಧೀನದಲ್ಲಿದ್ದುವೆಂಬುದು-ಈ ವಿಷಯಗಳನ್ನು ಪರಿಗಣಿಸಿದರೆ ಈತ ಗುಪ್ತ ಮನೆತನದ ಇಮ್ಮಡಿ ಚಂದ್ರಗುಪ್ತನೇ ಆಗಿರಬಹುದೆಂಬ ಅಭಿಪ್ರಾಯ ಈಗ ಬಹುಮಾನ್ಯವಾಗಿದೆ. ಈ ಶಾಸನ ಚಂದ್ರಗುಪ್ತನ ಮರಣಾನಂತರ ಅಸ್ತಿತ್ವಕ್ಕೆ ಬಂತೆಂದು ಹೇಳಲಾಗಿದೆ.
(ಜಿ.ಬಿ.ಆರ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ